ಸಿಕ್ಕಿಂ
	ಭಾರತದ ಒಂದು ರಾಜ್ಯ. ದಕ್ಷಿಣ ಮಧ್ಯ ಏಷ್ಯದ ಹಿಮಾಲಯದ ಮಡಿಲಲ್ಲಿರುವ ಉತ್ತರ ಭಾರತದ ಗಡಿ ರಾಜ್ಯ. ಉತ್ತರದಲ್ಲಿ ಟಿಬೆಟ್, ಪಶ್ಚಿಮದಲ್ಲಿ ನೇಪಾಲ, ಪೂರ್ವದಲ್ಲಿ ಭೂತಾನ್ ಮತ್ತು ದಕ್ಷಿಣದಲ್ಲಿ ಪಶ್ಚಿಮ ಬಂಗಾಲಗಳು ಗಡಿಗಳಾಗಿವೆ. ಸಿಕ್ಕಿಂನ ಪಶ್ಚಿಮಕ್ಕೆ ನೇಪಾಲದ ಅಂಚಿನಲ್ಲಿ ಎತ್ತರದಲ್ಲಿ ಪ್ರಪಂಚದಲ್ಲೆ 3ನೆಯದಾಗಿರುವ ಕಾಂಚನಗಂಗಾ ಪರ್ವತ ಶ್ರೇಣಿಯಿದೆ. ಈ ರಾಜ್ಯ 27015† ಉಅ ದಿಂದ 2805† ಉಅ ದವರೆಗೆ ಮತ್ತು 280ಪೂ.ರೇ ವರೆಗೆ ವಿಸ್ತರಿಸಿದ್ದು, 7096 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಜನಸಂಖ್ಯೆ: 5,40,493. ಗಾಂಗ್‍ಟಕ್ ಇದರ ರಾಜಧಾನಿ ಮತ್ತು ಸಿಕ್ಕಿಂನ ಏಕೈಕನಗರ. ಸಿಕ್ಕಿಂ ರಾಜ್ಯವನ್ನು ಆಡಳಿತಾನುಕೂಲಕ್ಕೆ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಉತ್ತರಭಾಗ 4,226 ಚ.ಕಿ.ಮೀ ಇದ್ದು ಮನ್‍ಗನ್ ಕೇಂದ್ರ ಸ್ಥಳವಾಗಿದೆ. ಪೂರ್ವಭಾಗ 954 ಚ.ಕಿ.ಮೀ ಇದ್ದು ಗಾಂಗ್‍ಟಾಕ್ ಮುಖ್ಯ ಆಡಳಿತ ಕೇಂದ್ರ. ದಕ್ಷಿಣ ಭಾಗ 750 ಚ.ಕಿ.ಮೀ ಇದ್ದು ನಾಮ್ಬಿ ಮುಖ್ಯ ಸ್ಥಳವಾಗಿದೆ. ಪಶ್ಚಿಮಭಾಗ 1,166 ಚ.ಕಿ.ಮೀ ಇದ್ದು ಗ್ಯಾಲ್ಸಿಂಗ್ ಆಡಳಿತಕೇಂದ್ರ ಸ್ಥಳವಾಗಿದೆ.

	ಮೇಲ್ಮೈ ಲಕ್ಷಣ: ಸಿಕ್ಕಿಂ ಪರ್ವತ ಪ್ರದೇಶಗಳಿಂದ ಕೂಡಿದ್ದು ಸುಮಾರು ನಾಲ್ಕನೆಯ ಮೂರರಷ್ಟು ಭಾಗ ದಟ್ಟವಾದ ಅರಣ್ಯಗಳಿಂದ ಕೂಡಿದೆ. ಇಲ್ಲಿನ ಪರ್ವತಗಳು ಸು. 7000 ಮೀಟರ್‍ಗಿಂತಲೂ ಹೆಚ್ಚು ಎತ್ತರವುಳ್ಳವು. ಇಲ್ಲಿರುವ ಕಾಂಚನಗಂಗಾ ಪರ್ವತ, ಸಮುದ್ರಮಟ್ಟದಿಂದ ಸು. 8,598 ಮೀ ಎತ್ತರದಲ್ಲಿದೆ. ಸಿಕ್ಕಿಂನಲ್ಲಿ ಹಿತ್ತಾಳೆ, ಸೀಸ, ಸತು ಪ್ರಮುಖವಾಗಿ ದೊರೆಯುವ ಖನಿಜಗಳಾಗಿವೆ.

	ನದಿಗಳು: ಬ್ರಹ್ಮಪುತ್ರಾ ನದಿಯ ಉಪನದಿಯಾದ ತೀಸ್ತಾ, ರಂಗಿತ್ ಮತ್ತು ರಂಗ್ಟೋ ನದಿಗಳು ಹರಿಯುತ್ತವೆ. ರಾಜ್ಯದ ಉತ್ತರದಿಂದ ದಕ್ಷಿಣಕ್ಕೆ ತೀಸ್ತಾ ನದಿ ಕಣಿವೆ ಹಬ್ಬಿದ್ದು ಉತ್ತರದ ಹೆಚ್ಚಿನ ಭಾಗಗಳಲ್ಲಿ ಮಾನಸೂನ್ ಮಳೆ ಬೀಳಲು ಸಹಕಾರಿಯಾಗಿದೆ.

	ವಾಯುಗುಣ: ಸಿಕ್ಕಿಂ ಹಿಮಾಲಯ ಪರ್ವತ ಪ್ರದೇಶದಲ್ಲಿದ್ದು ಇಲ್ಲಿನ ಎತ್ತರವಾದ ಪರ್ವತಗಳ ಮೇಲ್ಭಾಗ ಯಾವಾಗಲೂ ಹಿಮದಿಂದ ಆವೃತವಾಗಿರುತ್ತದೆ. 1000 ಮೀ ಗಳಿಗಿಂತ ಹೆಚ್ಚಿನ ಎತ್ತರ ಪ್ರದೇಶದಲ್ಲಿ ವಾಯುಗುಣ ಸಮಶೀತೋಷ್ಣವಾಗಿದ್ದರೆ, ಕೆಳಭಾಗದ ಕಣಿವೆ ಪ್ರದೇಶದಲ್ಲಿ ಉಷ್ಣವಲಯದ ವಾಯುಗುಣ ಮಾದರಿ ಕಂಡುಬರುತ್ತದೆ. ಗಾಂಗ್‍ಟಕ್ ನಲ್ಲಿ ಜನವರಿ ತಿಂಗಳು ತುಂಬ ಶೀತದಿಂದ ಕೂಡಿದ್ದು ಸರಾಸರಿ ಕನಿಷ್ಠ ಉಷ್ಣಾಂಶ 40 ಸೆ. ಮಾತ್ರವಿರುತ್ತವೆ. ಎಪ್ರಿಲ್‍ನಿಂದ ಅಕ್ಟೋಬರ್ ವರೆಗೆ ಗರಿಷ್ಠ ಉಷ್ಣಾಂಶದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಿದ್ದು ಸು. 220 ಸೆ. ಇರುತ್ತದೆ. ಮೇನಲ್ಲಿ ಕನಿಷ್ಠ 140 ಸೆ. ಉಷ್ಣಾಂಶವಿರುತ್ತದೆ. ಈ ಪ್ರದೇಶದ ಸರಾಸರಿ ವಾರ್ಷಿಕ ಮಳೆ ಸು. 350 ಸೆಂಮೀ.

	ಸಸ್ಯವರ್ಗ: ಈ ರಾಜ್ಯದ ತಗ್ಗು ಪ್ರದೇಶದಲ್ಲಿ ಅತಿ ಗಟ್ಟಿಯಾದ ಸಾಲ್ ವೃಕ್ಷಗಳು ಕಂಡುಬರುವುದಲ್ಲದೆ ಸು. 600 ಜಾತಿಯ ಹಣ್ಣಿನ ತೋಟದಲ್ಲಿರುವಂತಹ ಸಸ್ಯಗಳು ಕಂಡುಬರುತ್ತವೆ. ವಿಸ್ತೀರ್ಣವಾದ ಪ್ರದೇಶದ ಮತ್ತು ಉಷ್ಣವಲಯದ ನಿತ್ಯಹರಿದ್ವರ್ಣ ಪರ್ವತ ಸಸ್ಯವರ್ಗ ಕಂಡುಬರುತ್ತದೆ. 3,600-4,200 ಮೀಟರ್ ಎತ್ತರದ ಪ್ರದೇಶದಲ್ಲಿ ಮರಗಳು ಬೆಳೆದಿವೆ. ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಶೇ 44.07ರಷ್ಟು ಭಾಗ ಅರಣ್ಯದಿಂದ ಕೂಡಿದೆ.

	ಪ್ರಾಣಿವರ್ಗ: ಸಿಕ್ಕಿಂ ವನ್ಯಜೀವಿಗಳ ದೃಷ್ಟಿಯಿಂದ ಶ್ರೀಮಂತ ರಾಜ್ಯವಾಗಿದ್ದು ಸು. 500 ವಿವಿಧ ಜಾತಿಯ ಪ್ರಾಣಿ ಮತ್ತು ಪಕ್ಷಿಗಳ ಸಂಕುಲವಿದೆ. ಈ ರಾಜ್ಯದ ಉತ್ತರ ಭಾಗದಲ್ಲಿ ಯಾಕ್, ಕರಡಿ, ರೆಡ್ ಸಾಂಭಾರ್, ಸಿಲ್ವರ್ ಸ್ಲಾತ್ ಮತ್ತು ಚಿರತೆಗಳು ಉಷ್ಣವಲಯದ ಅರಣ್ಯದಲ್ಲಿ ಕಂಡುಬರುತ್ತವೆ.

	ಆರ್ಥಿಕತೆ: ಇಲ್ಲಿನ ಆರ್ಥಿಕ ವ್ಯವಸ್ಥೆ ಪ್ರಮುಖವಾಗಿ ವ್ಯವಸಾಯವನ್ನು ಅವಲಂಬಿಸಿದೆ. ಮೆಕ್ಕೆಜೋಳ, ಗೋದಿ, ಬತ್ತ, ಬಾರ್ಲಿ ಮತ್ತು ತೃಣಧಾನ್ಯಗಳು ಇಲ್ಲಿನ ಪ್ರಮುಖ ಬೆಳೆಗಳಾಗಿವೆ. ಇವಲ್ಲದೆ ಮೋಸಂಬಿ, ಆಲೂಗೆಡ್ಡೆ, ಸೇಬು ಮತ್ತು ಏಲಕ್ಕಿಯನ್ನು ಸಹ ಬೆಳೆಯುತ್ತಾರೆ. ಸಿಕ್ಕಿಂ ಭಾರತದಲ್ಲೆ ಅತಿ ಹೆಚ್ಚಾಗಿ ಏಲಕ್ಕಿಯನ್ನು ಉತ್ಪಾದಿಸುವ ರಾಜ್ಯವಾಗಿದೆ. 1995-96ರ ಅವಧಿಯಲ್ಲಿ ಈ ರಾಜ್ಯದ ಆಹಾರ ಧಾನ್ಯಗಳ ಒಟ್ಟು ಉತ್ಪಾದನೆ 1,04,200 ಟನ್‍ಗಳಷ್ಟಿತ್ತು.

	ಸಿಗರೇಟ್, ಮದ್ಯತಯಾರಿಕೆ, ಚರ್ಮ ಕೈಗಾರಿಕೆ, ಹಣ್ಣಿನ ಸಂರಕ್ಷಣೆ ರತ್ನಗಂಬಳಿ ಮತ್ತು ಗಡಿಯಾರ ತಯಾರಿಕೆ ಮುಂತಾದ ಸಣ್ಣ ಪ್ರಮಾಣದ ಕೈಗಾರಿಕೆಗಳೂ ಇಲ್ಲಿವೆ. ಜೊತೆಗೆ ಜಮಖಾನೆಗಳನ್ನು ನೇಯುವಿಕೆ, ಕೈಯಿಂದ ಕಾಗದ ಮರದಬೊಂಬೆ, ಬೆಳ್ಳಿ ಮತ್ತು ರಜತದ ವಸ್ತುಗಳನ್ನು ತಯಾರಿಸುವುದು ಇಲ್ಲಿನ ಜನರ ಮುಖ್ಯ ಉದ್ಯೋಗಗಳಾಗಿವೆ. ಇದರ ಜೊತೆಗೆ ಪ್ರವಾಸೋದ್ಯಮವನ್ನು ಅವಲಂಬಿಸಿದ್ದು ಇದಕ್ಕಾಗಿ ನೂತನ ರಸ್ತೆ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ.

	ಜನಸಂಖ್ಯೆ: ರಾಜ್ಯದಲ್ಲಿ 5,40,493 ಜನರು ವಾಸಿಸುತ್ತಿದ್ದು ಅವರಲ್ಲಿ ಗಂಡಸರು 8,88,217 (ಸೇ 53.32 ರಷ್ಟು) ಮತ್ತು 2,52,276 (ಸೇ 56.68 ರಷ್ಟು) ಮಹಿಳೆಯರು ಇದ್ದಾರೆ. ಇಲ್ಲಿ ಪ್ರತಿ ಚ.ಕಿಮೀ.ಗೆ ಕೇವಲ 76 ಜನರು ವಾಸಿಸುತ್ತಿದ್ದಾರೆ. ನೇಪಾಲ, ಭೂತಾನಗಳಿಂದ ಬಂದ ಜನರು, ಲೆಪ್ಚಾಗಳು ಸೇ. 70 ಮಂದಿ ಇದ್ದಾರೆ. ಇಂದು ಲೆಪ್ಚಾಗಳು ದೂರ ದೂರದ ಕಣಿವೆಗಳಲ್ಲಿ ನೆಲೆಸಿದ್ದು ಆಹಾರಕ್ಕಾಗಿ ಮೀನು ಹಿಡಿಯುವ, ಬೇಟೆಯಾಡುವ ಕೆಲಸವನ್ನು ಅವಲಂಬಿಸಿದ್ದಾರೆ. ಭೂತಾನ, ನೇಪಾಲದಿಂದ 1600 ರಲ್ಲಿ ಬಂದ ಭುಟಿಯಗಳು ಪಶುಪಾಲನೆ, ಕೃಷಿ ಅವಲಂಬಿಸಿದ್ದಾರೆ. ಲೆಪ್ಚಾಗಳು ಭುಟಿಯನ್ನರು ಬೌದ್ಧ ಧರ್ಮವನ್ನು ಅವಲಂಬಿಸಿದ್ದರೂ ಮೂಲದಲ್ಲಿ ಅವರೆಲ್ಲ ಹಿಂದುಗಳು. ಘೂರ್ಕಲಿ, ಸಿಕ್ಕಿಮಿ ಇವರ ಭಾಷೆಗಳು. ಇಂಗ್ಲಿಷ್ ಉಪಯೋಗವೂ ಅಲ್ಪಪ್ರಮಾಣದಲ್ಲಿದೆ.

	ಶಿಕ್ಷಣ: ರಾಜ್ಯದಲ್ಲಿ 1996-97ರಲ್ಲಿ 723 ಪೂರ್ವ ಪ್ರಾಥಮಿಕಶಾಲೆಗಳೂ 314 ಪ್ರಾಥಮಿಕ ಶಾಲೆಗಳೂ 117 ಹಿರಿಯ ಪ್ರಾಥಮಿಕ ಶಾಲೆಗಳೂ 72 ಪ್ರೌಢಶಾಲೆಗಳೂ ಮತ್ತು 27 ಹಿರಿಯ ಪ್ರೌಢಶಾಲೆಗಳೂ ಇದ್ದವು. 12ನೆಯ ತರಗತಿಯವರೆಗೆ ಉಚಿತ ಶಿಕ್ಷಣ ಜಾರಿಯಲ್ಲಿದ್ದು 5ನೆಯ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ. ಇದಲ್ಲದೆ ಈ ರಾಜ್ಯದಲ್ಲಿ ಸು.500 ವಯಸ್ಕರ ಶಿಕ್ಷಣ ಕೇಂದ್ರಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಕೇಂದ್ರಗಳೂ  ಪದವಿ ಕಾಲೇಜುಗಳೂ ಒಂದು ವಿಶ್ವವಿದ್ಯಾಲಯವೂ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ.

	ಈ ರಾಜ್ಯ 4 ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೊಂದಿದ್ದು ಪ್ರತಿ ಹಳ್ಳಿಗೂ ವಿದ್ಯುತ್‍ನ್ನು ಒದಗಿಸುತ್ತಿದೆ.

	ಇತಿಹಾಸ: ಸಿಕ್ಕಿಂ ಬೌದ್ಧ ಸ್ತೂಪಗಳನ್ನೊಳಗೊಂಡು ಸಾಂಸ್ಕøತಿಕವಾಗಿ ಸಂಪದ್ಭರಿತವಾಗಿದೆ. ಅಸ್ಸಾಮ್ ಮತ್ತು ಮಯನ್ಮಾರ್ ಪ್ರದೇಶಗಳಿಂದ ಬಂದಂತಹ ಲೆಪ್ಚ ಎಂಬ ಪಂಗಡಕ್ಕೆ ಸೇರಿದ ಜನರು ಇಲ್ಲಿನ ಮೂಲ ನಿವಾಸಿಗಳು. 1200ರಲ್ಲಿ ಭುಟಿಯ ಮತ್ತು ಟಿಬೇಟಿಯನ್ ಜನರು ಈ ರಾಜ್ಯಕ್ಕೆ ವಲಸೆ ಬಂದರು. ಇವರ ಜೊತೆ ನಾಮ್‍ಗ್ಯಾಲ ಜನಾಂಗಕ್ಕೆ ಸೇರಿದ ಜನರು ಸಹ ಬಂದರು. ಇವರು ಕಾಲಕ್ರಮೇಣ 1400 ರ ವೇಳೆಗೆ ಸಿಕ್ಕಿಂನ ರಾಜಕೀಯ ಹಿತವನ್ನು ಸಾಧಿಸಿದರು. ಇವರ ಆಡಳಿತ  1700 ರವರೆಗೂ ಮುಂದುವರಿಯಿತು. 1700 ರ ಅವಧಿಯಲ್ಲಿ ನೇಪಾಳ ಮತ್ತು ಭೂತಾನ್ ದಾಳಿಯಿಂದ ತತ್ತರಿಸಿದ ಸಿಕ್ಕಿಂ ತನ್ನ ಬಹುಭಾಗವನ್ನು ಕಳೆದುಕೊಂಡಿತು. ಅನಂತರ ಅನೇಕ ನೇಪಾಳಿಯರು ಸಹ ಸಿಕ್ಕಿಂ ರಾಜ್ಯಕ್ಕೆ ಬಂದು ನೆಲೆಸಿದರು. ಇದು 1830 ರಲ್ಲಿ ಸ್ವತಂತ್ರ್ಯ ರಾಜ್ಯವಾಗಿದ್ದರೂ ತನ್ನ ನೆರಹೊರೆಯ ರಾಜ್ಯಗಳೊಡನೆ ನಿರಂತರ ದಾಳಿಯಲ್ಲಿ ತೊಡಗಿತ್ತು. ತದನಂತರ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ಈ ರಾಜ್ಯ 1950 ರವರೆಗೆ ಒಂದು ಸ್ವತಂತ್ರ ರಾಷ್ಟ್ರವಾಗಿ ನ್ಯಾಮ್‍ಗ್ಯಾಲ್ ರಾಜ ಸಂತತಿಯವರಿಂದ ಆಳಲ್ಪಟ್ಟಿತು. 1950ರ ಒಪ್ಪಂದದ ಮೇರೆಗೆ ಈ ರಾಜ್ಯದ ವಿದೇಶಾಂಗ ನೀತಿ ರಕ್ಷಣೆ ಮತ್ತು ಸಂಪರ್ಕಗಳ ಹೊಣೆಯನ್ನು ಭಾರತ ವಹಿಸಿ ಕೊಂಡಿತು. 1973ರಲ್ಲಿ ಸಿಕ್ಕಿಂ ಭಾರತದ ಸಹ ರಾಜ್ಯವಾಗಿ, 1975ರಲ್ಲಿ ಭಾರತದಲ್ಲಿ 22ನೆಯ ರಾಜ್ಯವಾಗಿ ವಿಲೀನವಾಯಿತು.	  
 (ಬಿ.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ